ಫಿರಂಗಿ - ಕ್ಷಿಪಣಿಯನ್ನು ಪ್ರಕ್ಷೇಪಿಸಲು ಬಳಸುವ ಯುದ್ಧಾಸ್ತ್ರ (ಕ್ಯಾನನ್). ಇದರ ಭಾಗಗಳು ಮುಖ್ಯವಾಗಿ ಫಿರಂಗಿ ನಳಿಗೆ ಮತ್ತು ಇದನ್ನು ಹೊತ್ತಿರುವ ಬಂಡಿ. ನಳಿಗೆಯನ್ನು ಉಕ್ಕಿನ ಒಂದೇ ಘಟಕವಾಗಿ ಎರಕ ಹುಯ್ಯುವುದು ವಾಡಿಕೆ. ಕುಲುಮೆಯಲ್ಲಿ ಕಾಸಿ ತಟ್ಟಿ ರೂಪಣೆಕೊಡುವುದೂ (ಫೋರ್ಜಿಂಗ್) ಉಂಟು. ಫಿರಂಗಿದಳ (ಆರ್ಟಿಲ್ಲರಿ) ಇಂದಿನ ನೆಲ ಕಾಳಗದ ಪ್ರಬಲ ಅಸ್ತ್ರ. ಇದು ಮಾರಕ ಅಗ್ನಿ ವರ್ಷವನ್ನು ನಿರಂತರ ಕಾರುತ್ತ ಯುದ್ಧ ನಿರ್ಣಾಯಕ ಪಾತ್ರ ವಹಿಸಬಲ್ಲದು ಎಂದೇ ನೆಪೋಲಿಯನ್ನನ ಪ್ರಸಿದ್ಧ ಹೇಳಿಕೆ: ಯುದ್ಧ ಕಾರ್ಯಾಚರಣೆ ಫಿರಂಗಿ ದಳದ ಮೂಲಕ ನಡೆಯುತ್ತದೆ.

	ಯುದ್ಧಕ್ರಿಯೆಯಲ್ಲಿ ಕೈ ಕೈ ಮಿಲಾಯಿಸಿಕೆ ಮೊದಲ ಹಂತ. ವ್ಯಕ್ತಿ ವ್ಯಕ್ತಿಯನ್ನು ನೇರವಾಗಿ ಸಂಘಟಿಸಿ ಕಾದಾಡುವುದು ಇಲ್ಲಿಯ ಕ್ರಮ. ಇದಕ್ಕಿಂತ ಅಧಿಕ ಪರಿಣಾಮಕಾರಿಯಾದದ್ದು ಮರಸು ಕಾಳೆಗ. ವೈರಿಯ ದೃಷ್ಟಿಗೆ ಬೀಳದೆ ಆತನ ಮೇಲೆ ಅಸ್ತ್ರ ಪ್ರಯೋಗಿಸಿ ಗೆಲ್ಲುವುದು ಇಲ್ಲಿಯ ತಂತ್ರ. ಅಂದ ಮೇಲೆ ಯೋಧನಿಗೂ ವೈರಿಗೂ ನಡುವಿನ ಅಂತರವನ್ನು ಕ್ಷಿಪ್ರಾವಧಿಯಲ್ಲಿ ಗಮಿಸಿ ಕರಾರುವಕ್ಕಾಗಿ ಗುರಿ ತಲುಪಿ ಪರಿಣಾಮಕಾರಿಯಾಗಿ ನಾಶಕ್ರಿಯೆ ಸಾಧಿಸಬಲ್ಲ ಅಸ್ತ್ರ ಅಗತ್ಯ ಎಂಬುದು ಸ್ಪಷ್ಟ. ಕವಣೆ ಬೀರುಗ, ಬಹುಸಿಂಜಿನಿ ಧನುಸ್ಸು, ಮುದ್ಗಲ ಮುಂತಾದವು ಈ ಅಗತ್ಯವನ್ನು ಕ್ರಮೇಣ ಪೂರೈಸಿದುವು. ಕ್ರಿಸ್ತಪೂರ್ವ ದಿನಗಳಂದು ಗ್ರೀಕರಲ್ಲಿ ಬಳಕೆಯಲ್ಲಿದ್ದ ಕವಣೆ ಬೀರುಗಗಳು 450 ಕೆ.ಜಿ.ವರೆಗೆ ತೂಕವಿದ್ದ ಬಂಡೆಗಳನ್ನು 800ಮೀ ದೂರದವರೆಗೂ ಎಸೆಯಬಲ್ಲವಾಗಿದ್ದುವು. ಈ ಅದಿಮ ದಳವನ್ನು ಅಲೆಗ್ಸಾಂಡರ್ ಮಹಾಶಯ (ಕ್ರಿ.ಪೂ. 356-323) ತನ್ನ ಆಕ್ರಮಣ ಯುದ್ಧಗಳಲ್ಲಿ ಬಳಸಿದ್ದ. ಸಿಡಿಮದ್ದಿನ ಬಳಕೆಯನ್ನು ಚೀನೀಯರು ಹದಿಮೂರನೆಯ ಶತಮಾನದಷ್ಟು ಹಿಂದೆಯೇ ಕಂಡುಕೊಂಡಿದ್ದರು. ತುಪಾಕಿಗೆ ಸಿಡಿಮದ್ದು ಹಾಕಿ ಕಬ್ಬಿಣದ ಗೋಲಿಯನ್ನು ಒಂದಷ್ಟುದೂರ ಪ್ರಕ್ಷೇಪಿಸಬಹುದೆಂಬ ತಂತ್ರವನ್ನು ಜರ್ಮನಿಯ ಬರ್ತೋಲ್ಡ್ ಶ್ವಾಟ್ರ್ಜ್ ಎಂಬಾತ 1313ರಲ್ಲಿ ಆವಿಷ್ಕರಿಸಿದ. ಇಂದು ನಾವು ಫಿರಂಗಿ ಎಂದು ಹೆಸರಿಸುವ ಆಗ್ನೇಯಾಸ್ತ್ರದ ಮೂಲ ಇಲ್ಲಿದೆ.

	ತುಪಾಕಿಯಲ್ಲಿ ನಡೆಯುವ ಕ್ರಿಯೆಯ ಸೂತ್ರರೂಪ ವಿವರಣೆ ಇದು: ಅಡಕ ಮತ್ತು ಭದ್ರ ಜಾಗದಲ್ಲಿ ಸಿಡಿಮದ್ದಿನ ಆಸ್ಫೋಟನೆ, ಇದರಿಂದ ಉದ್ಭವವಾಗುವ ಅಗಾಧ ಸಂಮರ್ದಯುತ ಅನಿಲದ ಒತ್ತಡಕ್ಕೆ ಈಡಾಗುವ ಗೋಲಿಯ ವೇಗಯುತ ಚಾಲನೆ, ಇದರ ದಿಶೆಯನ್ನು ನಿಯಂತ್ರಿಸಲು ಸಾಕಷ್ಟು ಉದ್ದದ ನಳಿಗೆಯಲ್ಲಿ ಸಾಗಣೆ, ಮತ್ತು ಕೊನೆಯದಾಗಿ ನಳಿಗೆಯ ಕೊನೆಯಿಂದ ಮುಂದಕ್ಕೆ ಮುಕ್ತಚಲನೆ. ಆದ್ದರಿಂದ ತುಪಾಕಿಯಲ್ಲಿ ಸುಧಾರಣೆ ಎಂದರೆ ಈ ಒಂದೊಂದು ಕ್ರಿಯೆಯಲ್ಲಿಯೂ ತರುವ ಸುಧಾರಣೆ ಎಂಬುದು ಸ್ಪಷ್ಟ.

	ತುಪಾಕಿಯ ವಿನಾಶಕರ ಸಾಮಥ್ರ್ಯವನ್ನು ಪ್ರವರ್ಧಿಸಲಾಯಿತು. ಸಹಜವಾಗಿ ಅದರ ತೂಕ ಮತ್ತು ಗಾತ್ರ ವೃದ್ಧಿಯಾದುವು. ಯೋಧನಾಗಲಿ ಯೋಧರ ದಂಡಾಗಲಿ ಈ ಅಧಿಕ ತೂಕದ ತುಪಾಕಿಯನ್ನು ಹೊತ್ತು ಒಯ್ಯುವುದೂ ಅವಶ್ಯ ಕಂಡಲ್ಲಿ ಗುರಿ ಹೊಡೆಯುವುದೂ ಅಪ್ರಾಯೋಗಿಕವೆನಿಸಿದುವು. ಅಂದ ಮೇಲೆ ತುಪಾಕಿಗೊಂದು ಪೀಠವೋ ವಾಹನವೋ ಅನಿವಾರ್ಯ ಪರಿಕರವಾಯಿತು. ಹೀಗೆ ಬಂದ ಸಾಧನಗಳೇ ಪೆಟ್ಟಿಗೆ, ತೊಟ್ಟಿಲು, ಗಾಲಿಬಂಡಿ ಇತ್ಯಾದಿ. ಬಂಡಿ ಮೇಲೆ ಹೂಡಿದ ಹಿರಿ ತುಪಾಕಿಯೇ ಫಿರಂಗಿ. ಇದನ್ನು ವೆನೇಶಿಯನರು ಮೊದಲು ಬಳಕೆಗೆ ತಂದರು (1370). 	

	ಲೋಹವಿದ್ಯೆಯಲ್ಲಿ ಮುನ್ನಡೆ ಆದಂತೆ ಫಿರಂಗಿ ಉತ್ಪಾದರ ಆಯುಧವಾಗಿ ಬೆಳೆಯತೊಡಗಿತು. ಮೊದಲಿಗೆ ಕಲ್ಲುಗುಂಡುಗಳನ್ನು ಗೋಲಿಗಳಾಗಿ ಬಳಸುತ್ತಿದ್ದರು. ಮುಂದೆ ಕಬ್ಬಿಣದ ಗುಂಡುಗಳು ಬಳಕೆಗೆ ಬಂದುವು. ಅನೇಕ ಚಿಲ್ಲುಗಳನ್ನು ಒಂದಾಗಿ ಗಿಡಿದು ಮಾಡಿದ ಚಿಲ್ಲುಗುಂಡುಗಳು ಮುಂದಿನ ಸುಧಾರಣೆ (1573).

	ಹುಸೈಟ್ ಯುದ್ಧಗಳಲ್ಲಿ (1419-24) ಭಾಗವಹಿಸಿದ ಝಾನ್ ಝೀಸ್ಕಾ ಎಂಬಾತ ಫಿರಂಗಿಯನ್ನು ರಣರಂಗದಲ್ಲಿ ಪ್ರಯೋಗಿಸಿದ ಮೊದಲಿಗ. ಆದರೆ ಫಿರಂಗಿ ದಳವನ್ನು ಯುದ್ಧನಿರ್ಣಾಯಕಾಸ್ತ್ರವಾಗಿ ಉಪಯೋಗಿಸಿದವ ಸ್ವೀಡನ್ನಿನ ರಾಜ ಗುಸ್ಟಾವಸ್ ಅಡಾಲ್ಫಸ್ (1594-1632). ತರುವಾಯದ ವರ್ಷಗಳಲ್ಲಿ ಫಿರಂಗಿಗಳು ಯೂರೋಪಿಯನ್ ಸೈನ್ಯಗಳ ಅಗತ್ಯ ಅಂಗಗಳಾದುವು. ಅಡಾಲ್ಫಸನನ್ನು ಫಿರಂಗಿ ದಳದ ರಾಜನೆಂದು ಹೇಳಿದರೆ ನೆಪೋಲಿಯನ್ ಮಹಾಶಯನನ್ನು ಅದರ ಚಕ್ರವರ್ತಿ ಎಂದು ಹೇಳಬಹುದು. ಅಲ್ಪ ಯೋಧನಷ್ಟದಿಂದ ಕ್ಷಿಪ್ರವಿಜಯ ಗಳಿಸುವುದೇ ಫಿರಂಗಿದಳದ ಉದ್ದೇಶ.					(ಎ.ಸಿ.ಸಿ.)